ರುದರ್‍ಫರ್ಡ್, ಮಾರ್ಕ್
1831-1913. ಇಂಗ್ಲಿಷ್ ಕಾದಂಬರಿಕಾರ. ವಿಲಿಯಮ್ ಹೇಲ್‍ವೈಟ್ ಎಂಬುದು ಇವನ ನಿಜನಾಮ. ಈತ ಇಂಗ್ಲೆಂಡಿನ ಬೆಡ್‍ಫೋರ್ಡ್‍ನಲ್ಲಿ ಹುಟ್ಟಿದ. ಇವನ ತಂದೆ ವಿಲಿಯಮ್ ವೈಟ್ ಚರ್ಚಿನ ಮತಪದ್ಧತಿಯನ್ನು ಅನುಸರಿಸದೆ ಇದ್ದ ಒಂದು ಪಂಗಡದ ಒಬ್ಬ ಸದಸ್ಯನಾಗಿದ್ದ. ಈತ ಸಾಮಾನ್ಯ ಸಭೆಯ ಹೆಸರುವಾಸಿಯಾದ ದ್ವಾರಪಾಲಕನಾಗಿದ್ದ. ಇಲ್ಲಸ್ಟ್ರೇಟೆಡ್ ಟೈಮ್ಸ್ ಪತ್ರಿಕೆಗಾಗಿ ಪಾರ್ಲಿಮೆಂಟಿನ ಜೀವನವನ್ನು ಕುರಿತಂತೆ ಲೇಖನಗಳನ್ನು ಬರೆಯುತ್ತಿದ್ದ. ಈ ಬರೆಹಗಳನ್ನು ಇನ್ನರ್‍ಲೈಫ್ ಆಫ್ ದಿ ಹೌಸ್ ಆಫ್ ಕಾಮನ್ಸ್ ಎಂಬ ಶೀರ್ಷಿಕೆಯಡಿ ಯಲ್ಲಿ ಅನಂತರ ಇವನ ಮಗ ರುದರ್‍ಫರ್ಡ್ ಸಂಪಾದಿಸಿದ (1897).

ಜೆಶುಂಟ್ ಮತ್ತು ನ್ಯೂ ಕಾಲೇಜ್‍ಗಳಲ್ಲಿ ಸ್ಥಳಸಭಾ ಪದ್ಧತಿಯ ಕ್ರೈಸ್ತಪೌರೋಹಿತ್ಯದ ಬಗೆಗೆ ವಿದ್ಯಾಭ್ಯಾಸ ಮಾಡಿದ ಈತ ಬೌದ್ಧಿಕವಾಗಿ ಅನುಮಾನಗಳಿಗೆ ಒಳಗಾದ. ಇವನ ನಂಬಿಕೆಗಳನ್ನು ಒಬ್ಬ ನಾಸ್ತಿಕ ಪ್ರಶ್ನಿಸಿ ಟೀಕೆ ಮಾಡಿದ್ದು ಇವನಿಗೆ ಬಹಳ ಬೇಸರ ತಂದಿತು. ಹೀಗಾಗಿ ಈತ ಕ್ರೈಸ್ತ ಸ್ಥಳೀಯ ಸಭಾಧಿಕಾರದ ಮಾರ್ಗವನ್ನು ತ್ಯಜಿಸಿ, ಕ್ರೈಸ್ತರ ತ್ರಿಮೂರ್ತಿ ತತ್ತ್ವಕ್ಕೆ ವಿರುದ್ಧವಾಗಿ ಏಕದೈವವನ್ನು ಒಪ್ಪುವ ಮಾರ್ಗಕ್ಕೆ ಪರಿವರ್ತಿತನಾದ. ಬಡತನ ಮತ್ತು ಏಕಾಂಗಿತನವನ್ನು ಅನುಭವಿಸುತ್ತ ಲಂಡನ್ನಿನ ವಿಚಾರವಾದಿ ಪ್ರಕಾಶಕನೊಬ್ಬನ ಬಳಿ ಕೆಲಸಕ್ಕೆ ಸೇರಿದ. ಅನಂತರ ನೌಕಾಧಿಪತ್ಯದ ಕಛೇರಿಯಲ್ಲಿ ಗುಮಾಸ್ತನಾಗಿಯೂ ಕೆಲಸ ಮಾಡಿದ.

ಈತ ಕಾದಂಬರಿ ರಚನೆಗೆ ತೊಡಗಿದ್ದು ತನ್ನ ಐವತ್ತನೆಯ ವಯಸ್ಸಿನಲ್ಲಿ. ಈ ವೇಳೆಗೆ ಈತ ಪತ್ರಿಕೋದ್ಯಮದಲ್ಲಿ ಕೆಲಸ  ನಿರ್ವಹಿಸಿದ್ದ. ದಿ ಆಟೊಬಯಾಗ್ರಫಿ ಆಫ್ ಮಾರ್ಕ್ ರುದರ್‍ಫೋರ್ಡ್ ಎಂಬ ಇವನ ಕೃತಿ 1881ರಲ್ಲಿ ಪ್ರಕಟವಾಯಿತು. ಇವನ ಸ್ನೇಹಿತ ರುಬೆನ್‍ಶೇಪ್ ಕೌಟ್ ಎಂಬಾತ ಈತನ ಮರಣಾನಂತರ ಈ ಆತ್ಮಕಥೆಯನ್ನು ಸಂಪಾದಿಸಿ ಪ್ರಕಟಿಸಿದ. ಆತ್ಮಚರಿತ್ರೆ ಮತ್ತು ಕಾದಂಬರಿ ಎರಡರ ಅಂಶಗಳನ್ನೂ ಒಳಗೊಂಡಿರುವ ವಿಶಿಷ್ಟ ಕೃತಿಯಿದು. ಈ ಕೃತಿಯ ದೃಷ್ಟಿಕೋನ ಏನೆಂಬುದು ಇವನ ಈ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ: "ಜೀವನದ ನಾಲ್ಕನೆಯ ಒಂದು ಭಾಗ ಮಾತ್ರ ಬುದ್ಧಿಗ್ರಾಹ್ಯವಾದದ್ದು. ಇನ್ನುಳಿದ ನಾಲ್ಕನೆಯ ಮೂರು ಭಾಗ ಅರ್ಥವಾಗದ ಗಾಢ ಅಂಧಕಾರ". ಈ ಕಾದಂಬರಿ ಭೌತಿಕ ಮತ್ತು ಆಧ್ಯಾತ್ಮಿಕ ಒಂಟಿತನದ ಹೃದಯಸ್ಪರ್ಶಿ ದಾಖಲೆಯಾಗಿದೆ. ಧರ್ಮ ವಿರೋಧದಿಂದಾದ ಧಾರ್ಮಿಕ ಮತ್ತು ಬೌದ್ಧಿಕ ದಿವಾಳಿತನ ಈ ಕಾದಂಬರಿಯ ವಸ್ತು. ತೀವ್ರಗಾಮಿ ಪರಂಪರೆಯು ಆಧ್ಯಾತ್ಮಿಕತೆಯನ್ನು ಮರೆತು ಕೇವಲ ಭೌತಿಕವಾದುದಕ್ಕೆ ಪ್ರಾಮುಖ್ಯ ಕೊಡುವ ಅಧೋಗತಿಗೆ ಇಳಿದಿರುವುದನ್ನು ಈ ಕಾದಂಬರಿ ಚಿತ್ರಿಸುತ್ತದೆ. ಪರಂಪರೆಯ ಪತನವನ್ನು ಚಿತ್ರಿಸುವ ಈ ಕಾದಂಬರಿಯ ರೀತಿ ಹೃದಯವನ್ನು ಕಲಕುವಂತಿದೆ. ಮಾರ್ಕ್ ರುದರ್‍ಫೋರ್ಡ್ ಡೆಲಿವರೆನ್ಸ್ (1885) ಮತ್ತು ದಿ ರೆವಲ್ಯೂಷನ್ ಇನ್ ಟ್ಯಾನರ್ಸ್‍ಲೇನ್ (1887) ಎಂಬ ಕೃತಿಗಳನ್ನೂ ಇವನ ಸ್ನೇಹಿತನೇ ಸಂಪಾದಿಸಿ ಪ್ರಕಟಿಸಿದ.
ದಿ ರೆವಲ್ಯೂಷನ್ ಇನ್ ಟ್ಯಾನರ್ಸ್‍ಲೇನ್ ಎಂಬ ಕಾದಂಬರಿಯಲ್ಲಿ ಮೇಲಿನ ವಸ್ತುವನ್ನೇ ಇನ್ನೂ ಸ್ಪಷ್ಟವಾಗಿ ಅನ್ವೇಷಿಸಲಾಗಿದೆ. ಇದು ತಾಂತ್ರಿಕವಾಗಿ ಹಲವಾರು ನ್ಯೂನತೆಗಳುಳ್ಳ ಕಾದಂಬರಿಯಾದರೂ ವಿಶೇಷ ಆಸಕ್ತಿ ಕೆರಳಿಸುವಂಥ ಚಾರಿತ್ರಿಕ ಕಾದಂಬರಿಯಾಗಿದೆ. ಜಕಾರಿಯಾ ಕೋಲ್‍ಮನ್ ಈ ಕಾದಂಬರಿಯ ನಾಯಕ. ಸರ್ಕಾರದ ವಿರುದ್ಧ ಬಂಡೆದ್ದ ಒಬ್ಬ ತೀವ್ರಗಾಮಿ. ಲಂಡನ್ ನಗರವನ್ನು ಈ ಕಾರಣಕ್ಕಾಗಿಯೇ ಈತ ತ್ಯಜಿಸಬೇಕಾಗುತ್ತದೆ. ಆದರೆ ಇವನು ಮ್ಯಾಂಚೆಸ್ಟರ್‍ಗೆ ಬಂದಾಗ ಇವನನ್ನು ಬಂಧಿಸಿ ಎರಡು ವರ್ಷಗಳ ಕಾಲ ಜೈಲುವಾಸವನ್ನು ವಿಧಿಸಲಾಗುತ್ತದೆ.

ಸ್ವಿನೋಜಾಸ್ ಎಥಿಕ್ಸ್ (ಅನುವಾದ, 1890), ಕ್ಯಾಥರೀನ್ ಫರ್ಸ್ (1893), ಕ್ಲಾರಾ ಹಾಪ್‍ಗುಡ್ (1896), ಪೇಜಸ್ ಫ್ರಮ್ ಎ ಜರ್ನಲ್ ವಿತ್ ಅದರ್ ಪೇಪರ್ಸ್ (1900), ಜಾನ್ ಬುನ್‍ಯನ್(1905), ಮೋರ್ ಪೇಜಸ್ ಫ್ರಮ್ ಎ ಜರ್ನಲ್ (1910)-ಇವನ ಇತರ ಕೃತಿಗಳು. ಲಾಸ್ಟ್ ಪೇಜಸ್ (1915) ಎಂಬ ಕಾದಂಬರಿಯನ್ನು ಇವನ ಪತ್ನಿ ಸಂಪಾದಿಸಿದ್ದಾಳೆ.
ಕಾದಂಬರಿಯ ವಸ್ತುವಾಗಿ ಧಾರ್ಮಿಕ ವಿರೋಧವನ್ನು ಮುಖ್ಯಪರಂಪರೆಯ ಒಂದು ಅಂಗವೆಂದು ಚಿತ್ರಸಿದ್ದು ಇವನ ವೈಶಿಷ್ಟ್ಯ. ಇದನ್ನು ವಿಮರ್ಶಾತ್ಮಕವಾಗಿ, ಆದರೆ ಅನುಕಂಪೆಯಿಂದ ಚಿತ್ರಿಸಿದ. ಅಲ್ಲಿಯವರೆಗೆ ಕಾದಂಬರಿಯಿಂದ ಹೊರಗುಳಿದಿದ್ದ, ಅಂಗಡಿ ಇಟ್ಟ ವ್ಯಾಪಾರಿಗಳು ಮತ್ತು ಸಣ್ಣ ರೈತರು ಇವನ ಕಾದಂಬರಿಗಳಲ್ಲಿ ಪಾತ್ರಗಳಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಸಮಾಜದ ಈ ವರ್ಗದ ಜನರನ್ನು ಇವನು ಬಹಳ ಚೆನ್ನಾಗಿ ಬಲ್ಲವನಾಗಿದ್ದು, ಇವರ ಜೀವನವನ್ನು ಕಾದಂಬರಿಗಳಲ್ಲಿ ಸರಳ ಹಾಗೂ ಪಾರದರ್ಶಕ ಗದ್ಯದಲ್ಲಿ ಚಿತ್ರಿಸಿದ್ದಾನೆ. ಇವನ ಕಥನಕಲೆ ಶಕ್ತಿಯುತವಾದುದಾಗಿದೆ. 

ಈತ 1913 ಮಾರ್ಚ್ 14ರಂದು ಸಸೆಕ್ಸ್‍ನ ಗ್ರೂಮ್‍ಬ್ರಿಡ್ಜ್‍ನಲ್ಲಿ ನಿಧನನಾದ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ